ಬ್ಯಾಡಗಿ :
ಸಂಪೂರ್ಣ ಒಂದು ರಾತ್ರಿ ತೇರು ಉತ್ಸವ ಸಾಗುವ ಕಲ್ಲೇದೇವರ ಗ್ರಾಮದ ಶ್ರೀ ಕಲ್ಮೇಶ್ವರ ಜಾತ್ರಾ ಮಹೋತ್ಸವ ಇದೇ ಏ. 2 ರಿಂದ 4 ರವರೆಗೆ ನಡೆಯಲಿದೆ.
ಏ. 2 ರಂದು ಮಂಗಳವಾರ ಬೆಳಗ್ಗೆ ರುದ್ರಾಭಿಷೇಕ, ಕಂಕಣ ಕಟ್ಟುವುದು ಗ್ರಾಮದ ಎಲ್ಲಾ ದೇವರ ಪೂಜೆ ಹಾಗೂ ರಾತ್ರಿ 10ಕ್ಕೆ ಹೂವಿನ ತೇರಿನ ಸಂಭ್ರಮ ನಡೆಯಲಿದೆ. ಇನ್ನು ಏ. 3ರ ಬುಧವಾರ ನವಮಿಯಂದು ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಇಡೀ ರಾತ್ರಿ ಕಲ್ಮೇಶ್ವರ ದೇವರ ಮಹಾರಥೋತ್ಸವ ಜರುಗಲಿದೆ. ಸಕಲ ವಾಧ್ಯ ಮತ್ತು ವೀರಘಾಸೆ, ಭಜನೆ ಸೇರಿದಂತೆ ಇತರ ಕಾರ್ಯಕ್ರಮಗಳು ನಡೆಯಲಿವೆ.
ಕಣ್ಮನ ಸೆಳೆಯುವ ಓಕಳಿ
ಇನ್ನು ಏ. 4 ರ ದಶಮಿಯಂದು ಗುರುವಾರ ಮಧ್ಯಾಹ್ನ 3-30ಕ್ಕೆ ಸಂಭ್ರಮದ ಓಕಳಿಯಾಟ ಜರುಗಲಿದೆ. ಇಡೀ ಜಾತ್ರೆಯಲ್ಲಿ ಜನಾಕರ್ಷಣೆಯ ಕ್ಷಣಗಳನ್ನು ಓಕಳಿಯಲ್ಲಿ ನೆರೆದ ಜನತೆ ಕಣ್ತುಂಬಿಕೊಳ್ಳುತ್ತಾರೆ. ಕಲ್ಮೇಶ್ವರ ದೇವಸ್ಥಾನದ ಎದುರಿಗೆ ಇರುವ ಓಕಳಿಗುಣಿಗೆ ನೀರು ತುಂಬಿಸಿ ಅದಕ್ಕೆ ಬಣ್ಣ ಬೆರೆಸಿ, ಇದಕ್ಕೆ ತೆಂಗಿನ ಚಪ್ಪರ ಹಾಕಿರುತ್ತಾರೆ. ಆ ಚಪ್ಪರಕ್ಕೆ ದಪ್ಪನೆ ಬಿದುರಿನ ಬೊಂಬೂಗಳನ್ನು ಬಳಸಿ ಅವುಗಳಿಗೆ ತೆಂಗಿನಕಾಯಿ, ಅಲಸಿನ ಹಣ್ಣು ಸೇರಿದಂತೆ ಇತರ ವಿಶೇಷ ವಸ್ತುಗಳ್ನು ಕಟ್ಟಿರುತ್ತಾರೆ ಯುವಕರು ಓಕಳಿ ಗುಣಿಯ ಒಂದು ಬದಿಯಲ್ಲಿ ಸರದಿಯಲ್ಲಿ ಬಂದು ಚಪ್ಪರದ ಮೇಲೆ ಕಟ್ಟಿದ ವಸ್ತುಗಳನ್ನು ಕಿತ್ತುಕೊಂಡು ನೀರಿನಲ್ಲಿ ಹಾರುವ ದೃಶ್ಯ ನೆರೆದವರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.
ಸಂಜೆ ಬೆಲ್ಲದ ಬಂಡಿ
ಇನ್ನು ಏ. 4ರಂದು ಓಕಳಿ ಮುಗಿದ ನಂತರ ಸಂಜೆ ಬೆಲ್ಲದ ಬಂಡಿ ಮಜಲು ಕಾರ್ಯಕ್ರಮಗಳು ಜರುಗುತ್ತವೆ. ಓಕುಳಿ ಮುಕ್ತಾಯವಾಗುತ್ತಿದ್ದಂತೆ ತಮ್ಮ ಎತ್ತಿನ ಬಂಡಿಯಲ್ಲಿ ಬೆಲ್ಲದ ನೀರನ್ನು ತುಂಬಿಕೊಂಡು ಬರುವ ರೈತರು, ಎತ್ತನ್ನು ಜೋರಾಗಿ ಓಡಿಸಿಕೊಂಡು ಊರಿನ ಹೊರಗೆ ಹೋಗಿ ಅಲ್ಲಿ ಬೆಲ್ಲದ ನೀರು ಕುಡಿದು ವಾಪಸ್ ಬರುತ್ತಾರೆ. ಊರಿನ ಹೊರಗೆ ಹೋಗುವಾಗ ಮತ್ತು ವಾಪಸ್ ಬರುವ ಬಂಡಿ ಎಳೆಯುವ ಎತ್ತಿನ ಓಟ ನೋಡುಗರ ಮೈನವೀರೇಳಿಸುವಂತೆ ಮಾಡುತ್ತೇವೆ. ಅಂದು ಏ. 5ರಂದು ರಾತ್ರಿ 9.30ಕ್ಕೆ ಗ್ರಾಮದಲ್ಲಿ ಕಲ್ಮೇಶ್ವರ ಯುವ ಕಲಾ ನಾಟ್ಯ ಸಂಘದಿಂದ ಧರ್ಮದ ನುಡಿ ಬೆಂಕಿಯ ಕಿಡಿ ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ.
ಭಾರಿ ಬಯಲು ಜಂಗಿ ಕುಸ್ತಿ
ಜಾತ್ರೆ ಮುಕ್ತಾಯವಾದ ನಂತರ ಏ. 5 ರಿಂದ 7 ರವರೆಗೆ ಪ್ರತಿ ವರ್ಷದ ಪದ್ದತಿಯಂತೆ ಈ ಬಾರಿಯು ಕಲ್ಲೇದೇವರ ಗ್ರಾಮದಲ್ಲಿ ಬಸಪ್ಪ ಪುಟ್ಟಪ್ಪ ಕರಿಯಪ್ಪನವರ ಸ್ಮರಣಾರ್ಥ ಭಾರಿ ಬಯಲು ಜಂಗಿ ಕುಸ್ತಿ ಏರ್ಪಡಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ನೂರಾರು ಕುಸ್ತಿಪಟುಗಳು ಕುಸ್ತಿಯಲ್ಲಿ ಸೆಣಸಲಿದ್ದಾರೆ.
ಕುಸ್ತಿ ಪೈಲವಾನವರಿಗೆ ಪ್ರತಿ ಕುಸ್ತಿಗೆ ಯೋಗ್ಯ ಬಹುಮಾನ ನೀಡಲಾಗುವುದು. ಕೊನೆಯ ದಿನ ಕಡೆಯ ಕುಸ್ತಿಗೆ ಒಂದು ಬೆಳ್ಳಿ ಗದೆ ಕೊಡಲಾಗುವುದು, ಬಯಲು ಜಂಗಿ ಕುಸ್ತಿಯ ಹೆಚ್ಚಿನ ಮಾಹಿತಿಗಾಗಿ 9740950569, 9972342698, 9900983670 ಸಂಪರ್ಕಿಸಿ ಎಂದು ಕಲ್ಮೇಶ್ವರ ಜಾತ್ರಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.