ಸಚಿವ ದಿನೇಶ್ ಗುಂಡೂರಾವ್ ಕುಟುಂಬದ ವಿರುದ್ಧ ವಿವಾದಿತ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಎಫ್ಐಆರ್

ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣೆಯ ಪೊಲೀಸರು ಐಪಿಸಿ ಸೆಕ್ಷನ್ 153ಬಿ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇಶ್ ಗುಂಡೂರಾವ್ ಅವರ ಪತ್ನಿ ಟಬೂ ರಾವ್ ಯತ್ನಾಳ್ ವಿರುದ್ಧ ಏಪ್ರಿಲ್ 7ರಂದು ದೂರು ದಾಖಲಿಸಿದ್ದರು.

ಬೆಂಗಳೂರಿನ ರಾಮೇಶ್ವರಂ ಕಫೆ ಸ್ಫೋಟದ ಬಿಜೆಪಿ ನಂಟಿನ ಬಗ್ಗೆ ದಿನೇಶ್ ಗುಂಡೂರಾವ್ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ಬಸನಗೌಡ ಪಾಟೀಲ್ ಯತ್ನಾಳ್, ದಿನೇಶ್ ಗುಂಡೂರಾವ್ ಮನೆಯಲ್ಲಿಯೇ ಅರ್ಧ ಪಾಕಿಸ್ತಾನವಿದೆ. ಹೀಗಾಗಿ ಸಚಿವರು ರಾಷ್ಟ್ರ ವಿರೋಧಿ ಹೇಳಿಕೆ ನೀಡುವುದು ಅಭ್ಯಾಸವಾಗಿದೆ ಎಂದು ಗುಂಡೂರಾವ್ ಅವರ ಪತ್ನಿ ಟಬು ರಾವ್ ಅವರನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿದ್ದರು.

ಟಬು ರಾವ್ ಅವರಲ್ಲದೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಅವರ ಕುಟುಂಬದವರ ಬಗ್ಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಶೇಷಾದ್ರಿಪುರ ಠಾಣೆಗೆ ಗಾಂಧಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜೆ. ಸರವಣನ್ ಶನಿವಾರ ದೂರು ನೀಡಿದ್ದರು.

ದೂರು ಸ್ವೀಕರಿಸಿರುವ ಪೊಲೀಸರು, “ಯತ್ನಾಳ ಅವರು ವಿಜಯಪುರದಲ್ಲಿ ಮಾತನಾಡಿದ್ದಾರೆ. ಕೃತ್ಯ ನಡೆದ ಆಧಾರದಲ್ಲಿ ವಿಜಯಪುರ ಜಿಲ್ಲಾ ಪೊಲೀಸರಿಗೆ ದೂರು ಹಸ್ತಾಂತರಿಸಲಾಗುವುದು ಎಂದಿದ್ದರು.

Leave a Reply

Your email address will not be published. Required fields are marked *

error: Content is protected !!
× How can I help you?