ಹೊಸದಿಲ್ಲಿ: ದೇಶದ ಮೊದಲ ಮುಸ್ಲಿಂ ಮಹಿಳಾ ಪ್ರಧಾನಿ ಹಿಜಾಬ್ ಧರಿಸಿಯೇ ದೇಶವನ್ನು ಮುನ್ನಡೆಸಲಿದ್ದಾರೆ. ಅಂಥದ್ದೊಂದು ಕಾಲ ಬರಲಿದೆ ಎಂದು ಎಐಎಂಐಎಂ ಮುಖ್ಯಸ್ಥ, ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.
ಹಿಂದೂಸ್ಥಾನ್ ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿ, “ಭಾರತಕ್ಕೆ ಮೊದಲ ಮುಸ್ಲಿಂ ಮಹಿಳಾ ಪ್ರಧಾನಿ ಯಾವಾಗ ಸಿಗಬಹುದು’ ಎಂಬ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದಾರೆ. “ಅಲ್ಲಾಹನ ದಯೆಯಿಂದ ಹಿಜಾಬ್ ಧರಿಸಿದ ಮುಸ್ಲಿಂ ಮಹಿಳೆ ಪ್ರಧಾನಿಯಾಗಿ ಈ ಭವ್ಯ ದೇಶವನ್ನು ಮುನ್ನಡೆಸುವ ದಿನ ಬರಲಿದೆ. ಆ ದಿನವನ್ನು ಕಣ್ತುಂಬಿ ಕೊಳ್ಳಲು ನಾನು ಬದುಕಿಲ್ಲದೆ ಇರಬಹುದು!
ಆದರೆ ಮುಂದೊಂದು ದಿನ ಖಂಡಿತವಾಗಿಯೂ ಇದು ಸಾಧ್ಯವಾಗಲಿದೆ’ ಎಂದು ಹೇಳಿದ್ದಾರೆ.
ಇದೇ ವೇಳೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಬೇಕಿರುವ ಎಲ್ಲ ಪ್ರಯತ್ನಗಳನ್ನೂ ನಾವು ಮಾಡಿದ್ದೇವೆ. ಜನರು ಬಯಸಿದರೆ ನಾವು ಗೆಲ್ಲುತ್ತೇವೆ, ಒಂದು ವೇಳೆ ಗೆಲ್ಲದಿದ್ದರೆ ನಮ್ಮ ಪಕ್ಷದ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುತ್ತಿದ್ದೇವೆ ಎಂದು ಭಾವಿಸುತ್ತೇವೆ ಎಂದೂ ಒವೈಸಿ ಹೇಳಿದ್ದಾರೆ
ಮೋದಿ ಡಿಎನ್ಎಯಲ್ಲೇ ಮುಸ್ಲಿಂ ದ್ವೇಷ
ಪ್ರಧಾನಿ ಮೋದಿ ಮುಸ್ಲಿಮರ ವಿರುದ್ಧ ಮಾಡುವ ಭಾಷಣಗಳ ಬಗ್ಗೆ ನಿಮಗೆ ಅಚ್ಚರಿಯಾಗುತ್ತದೆಯೇ ಎಂದು ಪ್ರಶ್ನಿಸಿದಾಗ, ” ಇಲ್ಲ, ಮುಸ್ಲಿಮರನ್ನು ದ್ವೇಷಿಸುವುದು ಮೋದಿ ಅವರ ಡಿಎನ್ಎಯಲ್ಲಿಯೇ ಇದೆ. ಅದೇ ಅವರ ನಿಜವಾದ ಗುಣ ಮತ್ತು ಅದೇ ಅವರ ಹಿಂದುತ್ವದ ನಿಜವಾದ ಸಿದ್ಧಾಂತ’ ಎಂದು ಒವೈಸಿ ಹೇಳಿದ್ದಾರೆ. ಅಲ್ಲದೆ 2002ರಿಂದಲೂ ಮೋದಿ ಇದನ್ನೇ ಹೇಳುತ್ತ ಬಂದಿದ್ದಾರೆ.
ಹೀಗಿದ್ದರೂ ದುರದೃಷ್ಟವಶಾತ್ ಅವರಿಗೆ 2 ಬಾರಿ ಈ ದೇಶದ ಪ್ರಧಾನಿಯಾಗುವ ಅವಕಾಶ ಸಿಕ್ಕಿದೆ. ಈಗಲೂ ಮೋದಿ ಅದೇ ರೀತಿ ವಿಷಕಾರುವ ಪ್ರವೃತ್ತಿ ಮುಂದುವರಿಸಿದ್ದಾರೆ. ಸಮಾಜವನ್ನು ವಿಭಜಿಸಲು ಮುಂದಾಗಿದ್ದಾರೆ ಎಂದಿದ್ದಾರೆ.
ಮೈತ್ರಿಯಾಗದಿದ್ದರೆ ಜಗತ್ತೇ ನೀರಸವಲ್ಲ
ಐಎನ್ಡಿಐಎ ಒಕ್ಕೂಟದೊಂದಿಗೆ ಏಕೆ ಸೇರ್ಪಡೆಯಾಗಿಲ್ಲ ಎಂಬುದಕ್ಕೆ ಉತ್ತರಿಸಿದ ಒವೈಸಿ, ಮಹಾರಾಷ್ಟ್ರದ ನಮ್ಮ ಪಕ್ಷದ ಅಧ್ಯಕ್ಷ ಇಮಿ¤ಯಾಜ್ ಅವರು ಐಎನ್ಡಿಐಎ ಒಕ್ಕೂಟದ ಭಾಗವಾಗುವ ಬಗ್ಗೆ ಮಾತನಾಡೋಣ ಎಂದು ಮೂರು ಬಾರಿ ಸಾರ್ವಜನಿಕವಾಗಿಯೇ ಹೇಳಿದ್ದಾರೆ. ಆದರೆ ಎದುರಿನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಮ್ಮೊಂದಿಗೆ ಯಾರೋ ಮೈತ್ರಿಗೆ ಮುಂದಾಗಲಿಲ್ಲ ಎಂದ ಮಾತ್ರಕ್ಕೆ ಜಗತ್ತೇ ಮುಗಿಯಿತೆಂದು ನಾವು ಭಾವಿಸಲಿಲ್ಲ. ಹಾಗಾಗಿ ಒಕ್ಕೂಟ ಸೇರ್ಪಡೆಯಾಗಲಿಲ್ಲ ಎಂದಿದ್ದಾರೆ.
ಮತಕ್ಕಾಗಿ ಐಎನ್ಡಿಐಎ ಮುಸ್ಲಿಮರ ಓಲೈಕೆ
ಜಾತ್ಯತೀತ ಎಂದು ಹೇಳಿ ಕೊಳ್ಳುವ ಐಎನ್ಡಿಐಎ ಒಕ್ಕೂಟ ಮುಸಲ್ಮಾನರಿಗೆ ಟಿಕೆಟ್ ನೀಡುವು ದಕ್ಕೂ ಹಿಂದೇಟು ಹಾಕುತ್ತದೆ ಎಂದು ಒವೈಸಿ ಆಕ್ಷೇಪಿಸಿದ್ದಾರೆ. 48 ಕ್ಷೇತ್ರಗಳಿರುವ ಮಹಾರಾಷ್ಟ್ರ ದಲ್ಲಿ ಒಂದು ಕ್ಷೇತ್ರದ ಟಿಕೆಟ್ ಕೂಡ ಮುಸ್ಲಿಂ ಆಕಾಂಕ್ಷಿಗೆ ಸಿಗದೆ ಇರುವುದೇ ಇದಕ್ಕೆ ಉದಾಹರಣೆ. ರಾಜಸ್ಥಾನ, ಮಧ್ಯ ಪ್ರದೇಶ, ದಿಲ್ಲಿ ಮತ್ತು ಛತ್ತೀಸ್ ಗಢದಲ್ಲೂ ಇದೇ ಪರಿಸ್ಥಿತಿ ಇದೆ. ಜಾತ್ಯತೀತ ಎಂದು ಹೇಳಿ ಕೊಳ್ಳುವ ಪಕ್ಷಗಳು ಬಿಜೆಪಿಯನ್ನು ಮಣಿಸಲು ಮಾತ್ರ ಮುಸ್ಲಿಮ ರನ್ನು ಬಳಸುತ್ತಿವೆ ಎಂದಿದ್ದಾರೆ.