ಗದಗ-ಬೆಟಗೇರಿ ಅವಳಿ ನಗರದಲ್ಲಿ ಜಲಕ್ಷಾಮ ಆವರಿಸಿದೆ. ಕಳೆದ ಒಂದು ವಾರದಿಂದ ಹನಿ ನೀರು ಪೂರೈಕೆಯಾಗಿಲ್ಲ. ಜೀವಜಲಕ್ಕಾಗಿ ಜನರು ಗೋಳಾಟ ನಡೆಸಿದ್ದಾರೆ. ಹೌದು, ಅವಳಿ ನಗರಕ್ಕೆ ನೀರು ಸರಬರಾಜು ಮಾಡುತ್ತಿದ್ದ ಸಿಂಗಟಾಲೂರ ಬ್ಯಾರೇಜ್ ಸಂಪೂರ್ಣ ಖಾಲಿಯಾಗಿದ್ದು, ಡೆಡ್ ಸ್ಟೋರೇಜ್ ಮುಟ್ಟಿದೆ. ಪಂಪ್ ಹೌಸ್ಗೆ ನೀರು ಹೋಗುತ್ತಿಲ್ಲ. ಹೀಗಾಗಿ ಒಂದು ವಾರದಿಂದ ನೀರು ಪೂರೈಕೆ ಬಂದ ಆಗಿದ್ದು, ರಣ ಬಿಸಿಲಿನಲ್ಲಿ ಅವಳಿ ನಗರದ ಜನರು ನೀರು ನೀರು ಅಂತಿದ್ದಾರೆ. ಬ್ಯಾರೇಜ್ ಖಾಲಿಯಾಗುವ ಮುನ್ನ ಭದ್ರಾ ಡ್ಯಾಂನಿಂದ ನೀರು ಬಿಡಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಅವಳಿ ನಗರದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೂರ್ಯನ ಪ್ರತಾಪಕ್ಕೆ ಬತ್ತಿರುವ ತುಂಗೆಯ ಒಡಲು. ಅವಳಿ ನಗರಕ್ಕೆ ಪೂರೈಕೆ ಆಗುವ ಹಮ್ಮಿಗಿ ಬ್ಯಾರೇಜ್ ಸಂಪೂರ್ಣ ಖಾಲಿ. ಡೆಡ್ ಸ್ಟೋರೇಜ್ ಮುಟ್ಟುವ ಮುನ್ಸೂಚನೆ ಇದ್ದರೂ ಸಕಾಲಕ್ಕೆ ನೀರು ಹರಿಸುವಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ. ಹೌದು, ಈ ದೃಶ್ಯಗಳು ಕಂಡಿದ್ದು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಿಗಿ ಬಳಿಯ ಸಿಂಗಟಾಲೂರ ಬ್ಯಾರೇಜ್ನಲ್ಲಿ ನದಿ ಬತ್ತಿರುವುದರಿಂದ ಗದಗ-ಬೆಟಗೇರಿ ಅವಳಿ ನಗರದಲ್ಲಿ ಜಲಕ್ಷಾಮ ತಲೆದೂರಿದೆ. ಅವಳಿ ನಗರದ ಜನರು ಹನಿ ನೀರಿಗಾಗಿ ಒದ್ದಾಡುತ್ತಿದ್ದಾರೆ. ಕಳೆದ 15 ದಿನಗಳಿಂದ ಗದಗ-ಬೆಟಗೇರಿ ಅವಳಿ ನಗರಕ್ಕೆ ನೀರು ಪೂರೈಕೆಯಾಗಿಲ್ಲ. ಹೀಗಾಗಿ ಅವಳಿ ನಗರದ ಗಲ್ಲಿ ಗಲ್ಲಿಯಲ್ಲಿ ಜನರು ನೀರಿಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ.

ಮೊದಲೇ ರಣ ಬಿಸಲಿನಿಂದ ಜನರು ಹೈರಾಣಾಗಿದ್ದಾರೆ. ಈ ನಡುವೆ ಕುಡಿಯುವ ನೀರು ಕೂಡ ಸಿಗುತ್ತಿಲ್ಲ. ಅವಳಿ ನಗರದ 28 ವಾರ್ಡ್‌ಗಳಿಗೆ ಒಂದು ವಾರದಿಂದ ನೀರು ಬಂದಿಲ್ಲ. ಹನಿ ನೀರಿಗಾಗಿ ಜನರು ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಹಮ್ಮಿಗಿ ಬ್ಯಾರೇಜ್ ಸಂಪೂರ್ಣವಾಗಿ ಖಾಲಿಯಾಗುವವರೆಗೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದ್ದು, ಗದಗ-ಬೆಟಗೇರಿ ನಗರಸಭೆ ಹಾಗೂ ಜಿಲ್ಲಾಡಳಿತ ಜನರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನೀರಿನ ಪ್ರಮಾಣವನ್ನು ನೋಡಿಕೊಂಡು ಅಧಿಕಾರಿಗಳು ತುಂಗಾ ಡ್ಯಾಂನಿಂದ ನೀರು ಬಿಡುಗಡೆ ಮಾಡಿಸಬೇಕಾಗಿತ್ತು. ಆದ್ರೆ, ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರಿಸಿದ್ದಾರೆ ಎಂದು ಅವಳಿ ನಗರದ ಜನರು ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ.
