ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ ಕಾರ್ಯಕಾರಿ ಸಮಿತಿ (ಇಸಿ) ಸದಸ್ಯರು ‘ತಂಡ’ವಾಗಿ ಕೆಲಸ ಮಾಡುತ್ತಿಲ್ಲ. ತಮ್ಮನ್ನು ಬದಿಗೊತ್ತಲು ಸಮಿತಿ ಸದಸ್ಯರು ಪ್ರಯತ್ನಿಸುತ್ತಿದ್ದಾರೆ ಎಂದು ಅಸೋಷಿಯೇಷನ್‌ನ ಅಧ್ಯಕ್ಷೆ ಪಿ.ಟಿ ಉಷಾ ಆರೋಪಿಸಿದ್ದಾರೆ. ಉಷಾ ಕೂಡ ಇಸಿಯ ಭಾಗವಾಗಿದ್ದಾರೆ.
ಅವರು ‘ಇಸಿ’ಯ ಇತರ ಸದಸ್ಯರಿಗೆ ಪತ್ರ ಬರೆದಿದ್ದಾರೆ. ಅವರ ಪತ್ರವು ಕಾರ್ಯಕಾರಿ ಸಮಿತಿ ಸದಸ್ಯರಲ್ಲಿ ಪರಸ್ಪರರ ನಡುವೆ ನಂಬುಇಕೆ ಕುಸಿತವಾಗಿದೆ ಎಂಬುದನ್ನು ಸೂಚಿಸುತ್ತದೆ ಎಂದು ಟಿಎನ್‌ಐಇ ವರದಿ ಮಾಡಿದೆ.
ಬಹುತೇಕ ಇಸಿ ಸದಸ್ಯರು ಉಷಾ ಅವರ ಕಾರ್ಯನಿರ್ವಾಹಕ ಸಹಾಯಕ ಅಜಯ್ ನಾರಂಗ್ ಅವರನ್ನು ಹುದ್ದೆಯಿಂದ ತೆಗೆದುಹಾಕುವಂತೆ ಸೂಚಿಸಿದ್ದಾರೆ. ಆದಾಗ್ಯೂ, ಉಷಾ ಅವರು ತಮ್ಮ ಪತ್ರದಲ್ಲಿ ಇಸಿಯು ನಾರಂಗ್ ಅವರನ್ನು ನೇಮಿಸಲು ಅಥವಾ ವಜಾಗೊಳಿಸಲು ಸಾಧ್ಯವಿಲ್ಲ ಎಂದು ಒತ್ತಿಹೇಳಿದ್ದಾರೆ. ವರದಿಯ ಪ್ರಕಾರ, ಆ ಸ್ಥಾನಕ್ಕೆ ಸಿಇಒ ರಘುರಾಮ್ ಅಯ್ಯರ್ ಅವರನ್ನು ನೇಮಿಸುವಂತೆ ಒತ್ತಾಯಿಸಿರುವುದಾಗಿ ಇಸಿ ಹೇಳಿಕೊಂಡಿದೆ. ಕುತೂಹಲಕಾರಿಯಾಗಿ, ಅಯ್ಯರ್ ಮತ್ತು ನಾರಂಗ್ ತಮ್ಮ ಹುದ್ದೆಗಳಲ್ಲಿ ಸರಿಯಾದ ರೀತಿಯಲ್ಲಿಯೇ ಕೆಲಸ ಮಾಡುತ್ತಿದ್ದಾರೆ.
“ಸಿಬ್ಬಂದಿಗಳ ನೇಮಕ ಮತ್ತು ವಜಾ ಸೇರಿದಂತೆ ದೈನಂದಿನ ಆಡಳಿತಾತ್ಮಕ ಕಾರ್ಯಗಳ ನಿರ್ಧಾರವು ಕಾರ್ಯಕಾರಿ ಸಮಿತಿಯ ಕೆಲಸವಲ್ಲ ಎಂಬುದನ್ನು ನಿಮಗೆ (ಇಸಿ ಸದಸ್ಯರು) ನೆನಪಿಸುತಿದ್ದೇನೆ. ಇಸಿಯಾಗಿ, ನಾವು ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ಅನ್ನು ಎತ್ತರಕ್ಕೆ ಕೊಂಡೊಯ್ಯಲು ನಮ್ಮ ಅಧಿಕಾರ ಮತ್ತು ಹಕ್ಕುಗಳನ್ನು ಬಳಸಬೇಕು” ಎಂದು ಉಷಾ ಪತ್ರದಲ್ಲಿ ಬರೆದಿದ್ದಾರೆ.
“ಅಧ್ಯಕ್ಷರ ಕಾರ್ಯನಿರ್ವಾಹಕ ಸಹಾಯಕರ ನೇಮಕಾತಿಯು ಕಾರ್ಯಕಾರಿ ಸಮಿತಿಯ ಅಧಿಕಾರ ವ್ಯಾಪ್ತಿಗೆ ಒಳಪಡುವುದಿಲ್ಲ. ಆದ್ದರಿಂದ ವಜಾಗೊಳಿಸುವಿಕೆ ಕೂಡ ಕಾನೂನುಬದ್ಧವಾಗಿರುವುದಿಲ್ಲ. ಅದು ಹೊರ ಜಗತ್ತಿಗೆ ಕೆಟ್ಟದಾಗಿ ಬಿಂಬಿತವಾಗುತ್ತದೆ” ಎಂದು ಹೇಳಿದ್ದಾರೆ.
ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಭವನಕ್ಕೆ ಅನಧಿಕೃತ ವ್ಯಕ್ತಿಗಳು ಪ್ರವೇಶಿಸದಂತೆ ನಿರ್ದೇಶನ ನೀಡುವ ನೋಟಿಸ್‌ಗೆ ಒಂಬತ್ತು ಇಸಿ ಸದಸ್ಯರು ಸಹಿ ಹಾಕಿದ್ದು, ಆ ನೋಟಿಸ್‌ಅನ್ನು ಅಂಟಿಸಿದ ನಂತರ ಉಷಾ ಅವರು ಪತ್ರ ಬರೆದಿದ್ದಾರೆ.
ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಭವನದಲ್ಲಿ ಅಂಟಿಸಲಾದ ನೋಟಿಸ್‌ನ ಎಲ್ಲ ಪ್ರತಿಗಳನ್ನು ತೆಗೆದುಹಾಕಲು ಸಿಬ್ಬಂದಿಗೆ ನಿರ್ದೇಶಿಸಲಾಗಿದೆ. ಇದಲ್ಲದೆ, ನನ್ನ ಕಾರ್ಯನಿರ್ವಾಹಕ ಸಹಾಯಕರ ಮೂಲಕ ನನ್ನ ಕಚೇರಿ ನೀಡುವ ಮಾರ್ಗದರ್ಶನ ಮತ್ತು ನಿರ್ದೇಶನಗಳನ್ನು ಅನುಸರಿಸಲು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಸಿಬ್ಬಂದಿಗೆ ಸೂಚಿಸಲಾಗಿದೆ” ಎಂದು ಉಷಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ನಾವು ಇನ್ನೂ ತಂಡವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ನಿರಾಶಾದಾಯಕವಾಗಿದೆ. ನಿಮ್ಮ ಪ್ರತಿಯೊಂದು ಕಾರ್ಯಗಳು ನನ್ನನ್ನು ಬದಿಗೆ ತಳ್ಳುವ ಪ್ರಯತ್ನವಾಗಿದೆ” ಎಂದು ಹೇಳಿದ್ದಾರೆ.
ಟಿಎನ್‌ಐಇ ವರದಿ ಪ್ರಕಾರ, ಹಿರಿಯ ಉಪಾಧ್ಯಕ್ಷ ಅಜಯ್ ಪಟೇಲ್ ಬಂಡಾಯ ಎದ್ದಿರುವವರಲ್ಲಿ ಮುಂಚೂಣಿಯಲ್ಲಿದ್ದಾರೆ. ಅಧ್ಯಕ್ಷರ ಅನುಪಸ್ಥಿತಿಯ ಸಂದರ್ಭದಲ್ಲಿ ಮಾತ್ರ ಹಿರಿಯ ಉಪಾಧ್ಯಕ್ಷರು ಅಧಿಕಾರ ವಹಿಸಿಕೊಳ್ಳಬಹುದು ಎಂದು ಉಷಾ ತಮ್ಮ ಪತ್ರದಲ್ಲಿ ಒತ್ತಿಹೇಳಿದ್ದಾರೆ.