ಯಡಿಯೂರಪ್ಪ ಹೇಳಿಕೆಗೆ ದಿಂಗಾಲೇಶ್ವರ ಶ್ರೀ ತಿರುಗೇಟು

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಸ್ಪರ್ಧಿಸಲು ನಿರ್ಧರಿಸಿರುವ ದಿಂಗಾಲೇಶ್ವರ ಶ್ರೀಗಳು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸಂಧಾನದ ಬಳಿಕವೂ ತಮ್ಮ ಪಟ್ಟು ಸಡಿಲಿಸಿಲ್ಲ. ಸೋಮವಾರ ಶ್ರೀಗಳನ್ನು ಭೇಟಿ ಆದ ಬಳಿಕ ಯಡಿಯೂರಪ್ಪ ಅವರು ಶ್ರೀಗಳು ಜೋಶಿ ಅವರ ಮುಂದೆ ಸ್ಪರ್ಧಿಸುವ ಸಾಹಸಕ್ಕೆ ಕೈಹಾಕಬಾರದು ಎಂದು ಹೇಳಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಶ್ರೀಗಳು, ದುಸ್ಸಾಹಸ ಯಾವುದು ಸಾಹಲ ಯಾವುದು ಎಂದು ಮುಂದಿನ ದಿನಗಳಲ್ಲಿ ತಿಳಿಯಲಿದೆ ಎಂದು ತಿರುಗೇಟು ನೀಡಿದ್ದಾರೆ.
ಹುಬ್ಬಳ್ಳಿ: ನಮ್ಮದು ದುಸ್ಸಾಹಸವೋ, ಸಾಹಸವೋ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ ಎಂದು ಫಕೀರ ಶ್ರೀ ದಿಂಗಾಲೇಶ್ವರ ಸ್ವಾಮೀಜಿಗಳು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ತಿರುಗೇಟು ನೀಡಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಆಯೋಜಿಸಿದ್ದ ಬೆಂಬಲಾರ್ಥ ಸಭೆಯಲ್ಲಿ ಅವರು ಮಾತನಾಡಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿರುದ್ಧ ಸ್ಫರ್ಧಿಸುವ ದುಸ್ಸಾಹಸಕ್ಕೆ ಕೈ ಹಾಕಬೇಡಿ ಎಂಬ ಬಿಎಸ್‌ವೈ ಹೇಳಿಕೆಗೆ ತಿರುಗೇಟು ನೀಡಿದ ಶ್ರೀಗಳು, ಸ್ವಾಭಿಮಾನಕ್ಕೆ ಧಕ್ಕೆ ಬಂದಿರುವಾಗ ನಾವು ಯಾರ ಮಾತನ್ನೂ ಕೇಳುವುದಿಲ್ಲ. ಚುನಾವಣೆಗೆ ಸಂಬಂಧಿಸಿದಂತೆ ಯಾರೊಟ್ಟಿಗೂ, ಯಾವ ಪಕ್ಷದ ಮುಖಂಡರೊಂದಿಗೂ ಚರ್ಚೆ ಮಾಡುವುದಿಲ್ಲ. ನಮ್ಮ ಭಕ್ತರ ಮತ್ತು ಮತದಾರರ ಜೊತೆಗೆ ಮಾತ್ರ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.
ಸೋಲಿನ ಭಯದಿಂದ ಜೋಶಿ ಸಭೆ
ಸೋಲಿನ ಭಯದಿಂದ ಪ್ರಹ್ಲಾದ ಜೋಶಿ ಅವರು ಅನೇಕ ಸಮುದಾಯಗಳ ಮುಖಂಡರ ಜೊತೆ ಸಭೆ, ಸಂಘಟನೆ ಮಾಡುತ್ತಿದ್ದಾರೆ. ಮನೆ, ಮಠಗಳಿಗೆ ಅಲೆದಾಡುತ್ತಿದ್ದಾರೆ. ಈ ಕೆಲಸ ಮೊದಲೇ ಮಾಡಿದ್ದರೆ ನಾವೇಕೆ ರಾಜಕಾರಣಕ್ಕೆ ಬರುತ್ತಿದ್ದೆವು. ಪ್ರಹ್ಲಾದ ಜೋಶಿ ಅವರ ಭಕ್ತರು, ಮಠದ ಭಕ್ತರು ಎಂದು ಹೇಳಿಕೊಂಡು ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ನನ್ನ ಪರವಾಗಿ ಜನರೇ ಪ್ರಚಾರ ಮಾಡುತ್ತಿದ್ದಾರೆ ಎಂದರು.

ಕೆಲವರು ನಮಗೆ ಭಯವನ್ನುಟುಮಾಡಿದ್ದಾರೆ. ಹೀಗಾಗಿ ಬಹಿರಂಗವಾಗಿ ನಿಮ್ಮನ್ನು ಬೆಂಬಲಿಸಲು ಆಗುತ್ತಿಲ್ಲ. ಆದರೆ, ಒಳ ಒಳಗೆ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ನಮ್ಮ ಭಕ್ತರು ಹೇಳುತ್ತಿದ್ದಾರೆ. ರಾಜಕಾರಣಿಯಾದವ ಜನರ ಮನ ಒಲಿಸುವ ಪ್ರಯತ್ನ ಮಾಡಬೇಕೇ ಹೊತರು ಭಯ ಪಡಿಸಬಾರದು ಎಂದು ಹೇಳಿದರು.
ಸ್ವಾಭಿಮಾನದ ಚುನಾವಣೆಗಾಗಿ ಏಪ್ರಿಲ್ 18 ರಂದು ನಾಮಪತ್ರ ಸಲ್ಲಿಸಲಿದ್ದೇನೆ. ಇಂತಿಷ್ಟೇ ಜನ ಬರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಸ್ವಾಭಿಮಾನದ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಸಾಕಷ್ಟು ಜನ ಭಾಗವಹಿಸುವ ಸಾಧ್ಯತೆ ಇದೆ ಎಂದರು.
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ವಿರುದ್ಧ ದಿಂಗಾಲೇಶ್ವರ ಶ್ರೀಗಳು ಪಕ್ಷೇತರ ಸ್ಪರ್ಧಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಪ್ರಹ್ಲಾದ್ ಜೋಶಿ ಅವರು ಗೆದ್ದ ಮೇಲೆ ಗೆಲ್ಲಿಸಿದವರನ್ನು ಮರೆತರು. ಪಕ್ಷಪಾತ ಮಾಡಿದರು ಎಂಬುದು ಶ್ರೀಗಳ ಆರೋಪವಾಗಿದೆ. ಶ್ರೀಗಳ ಜೊತೆಗೆ ಸಂಧಾನಕ್ಕೆ ಬಿಜಿಪಿಯ ಹಿರಿಯ ಮುಖಂಡರು ಮಾತುಕತೆ ನಡೆಸಿದರೂ ಫಲಪ್ರದವಾಗಿಲ್ಲ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೇ ಸ್ವತಃ ಸಂಧಾನ ನಡೆಸಿದರೂ ಸ್ವಾಮೀಜಿ ಪಟ್ಟು ಬಿಟ್ಟಿಲ್ಲ. ಸ್ಪರ್ಧೆ ಮಾಡಿಯೇ ತೀರುವೆ ಎಂದಿದ್ದಾರೆ. ಸೋಮವಾರ ಸಂಧಾನದ ಬಳಿಕ ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಯಡಿಯೂರಪ್ಪ ಅವರು ಸ್ವಾಮೀಜಿ ಅವರು ಪ್ರಹ್ಲಾದ್ ಜೋಶಿ ಅವರ ಮುಂದೆ ಸ್ಪರ್ಧಿಸುವ ದುಸ್ಸಾಹಸಕ್ಕೆ ಕೈ ಹಾಕಬಾರದು ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಇದೀಗ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!
× How can I help you?