ಪ್ರಹ್ಲಾದ್‌ ಜೋಶಿ ಅವರೇ ಗುರು – ಶಿಷ್ಯರನ್ನು ಅಗಲಿಸ್ತಿದೀರಿ; ಇದ್ರಿಂದ ಗಂಡ – ಹೆಂಡ್ತಿ ದೂರ ಆಗ್ಬೇಕಾಗುತ್ತೆ ನೋಡಿ : ದಿಂಗಾಲೇಶ್ವರ ಸ್ವಾಮೀಜಿ

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುರು ಶಿಷ್ಯರನ್ನು ಅಗಲಿಸುವ ಕೆಲಸಕ್ಕೆ ಕೈ ಹಾಕಿದ್ದೀರಿ, ಅದಾದರೆ ನಿಮ್ಮ ಗಂಡ – ಹೆಂಡತಿಯನ್ನು ಅಗಲಿಸುವ ಕೆಲಸ ಬಂದೀತು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಅದಲ್ಲದೇ ನಮ್ಮ ಹಣೆಯ ಮೇಲೆ ಇರುವ ಭಸ್ಮದ ಮೇಲೆ ನಾಮವನ್ನು ಹಚ್ಚುವ ಕೆಲಸವನ್ನು ನಾವು ಸಹಿಸಲ್ಲ ಎಂದಿರುವ ದಿಂಗಾಲೇಶ್ವರ ಸ್ವಾಮೀಜಿ, ಪ್ರಹ್ಲಾದ್‌ ಜೋಶಿ ಅವರನ್ನು ಸೋಲಿಸುವುದೇ ನನ್ನ ಗುರಿ ಎಂದಿದ್ದಾರೆ
ಹುಬ್ಬಳ್ಳಿ : ಪ್ರಹ್ಲಾದ್‌ ಜೋಶಿ ಅವರೇ ಗುರು – ಶಿಷ್ಯರನ್ನು ಅಗಲಿಸುವ ಹುಚ್ಚು ಸಾಹಸಕ್ಕೆ ಕೈ ಹಾಕಿದೀರಿ. ಅಂತಹ ಸಂದರ್ಭ ಬಂದರೆ ನೀವು ಗಂಡ – ಹೆಂಡತಿಯನ್ನು ಅಗಲಿಸಬೇಕಾಗುತ್ತದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ನನ್ನ ಮತ್ತು ಹಿರಿಯ ಸ್ವಾಮೀಜಿ ನಡುವೆ ಒಡಕು ಸೃಷ್ಟಿಸುವ ಕೆಲಸವನ್ನು ಜೋಶಿ ಮಾಡುತ್ತಿದ್ದು, ಮೊದಲಿನಿಂದಲೂ ಇದೇ ಕೆಲಸವನ್ನು ಕೇಂದ್ರ ಸಚಿವರು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಪ್ರಹ್ಲಾದ್‌ ಜೋಶಿ ಅವರಿಗೆ ಮಾನ ಮರ್ಯಾದೆ ಇದೆಯಾ? ನಮ್ಮ ಹಣೆಯ ಮೇಲಿನ ಭಸ್ಮದ ಮೇಲೆ ನಾಮವನ್ನು ಹಚ್ಚುವ ಕೆಲಸವನ್ನು ನಾವು ಸಹಿಸಲ್ಲ. ನೀವು ಸಂಸದರಾದ ನಂತರ ಮಠಗಳು, ನಮ್ಮ ಸಮುದಾಯದವರು ಅಧಃಪತನವಾಗಿದ್ದಾರೆ. ಜೋಶಿ ಅವರನ್ನು ಸೋಲಿಸುವುದೇ ನಮ್ಮ ಗುರಿ. ಮಠಗಳ ನಡುವೆ ಪ್ರಹ್ಲಾದ್‌ ಜೋಶಿ ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಜೋಶಿ ಅವರ ಸೋಲು ಖಚಿತ, ಸರ್ವೇಯಲ್ಲಿ ಇದು ಬಹಿರಂಗವಾಗಿದೆ ಎಂದರು.
ಶುಕ್ರವಾರ ಪ್ರಹ್ಲಾದ್‌ ಜೋಶಿ ಅವರು ಭದ್ರಾಪುರದಲ್ಲಿ ಶಿರಹಟ್ಟಿ ಮಠದ ನಮ್ಮ ಹಿರಿಯ ಸ್ವಾಮೀಜಿಯನ್ನು ಭೇಟಿ ಮಾಡಿದ್ದಾರೆ. ಈ ಮೂಲಕ ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಸ್ವಾಮೀಜಿಗಳಿಗೆ ಪ್ರಹ್ಲಾದ್‌ ಜೋಶಿ ಪಾಕೆಟ್ ಕೊಡುತ್ತಿದ್ದಾರೆ, ಅನೇಕ ಸ್ವಾಮೀಜಿಗಳನ್ನು ಭೇಟಿ ಮಾಡಿ ಪಾಕೆಟ್ ಕೊಡುತ್ತಿದ್ದಾರೆ. ನನ್ನ ಕಡೆ ವಿಡಿಯೋ ಇದೆ ಎಂದು ಪ್ರಹ್ಲಾದ್‌ ಜೋಶಿ ಅವರ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ.
ಅವರಿಗೆ ಜನ ಹಾಕಿರುವ ಶಾಲನ್ನು ಸ್ವಾಮೀಜಿಗಳಿಗೆ ಹಾಕುತ್ತಿದ್ದಾರೆ. ಲಿಂಗಾಯತರ ಜೊತೆ ಪ್ರಹ್ಲಾದ್‌ ಜೋಶಿ ಇದಾರಾ? ಎಂದು ಪ್ರಶ್ನಿಸಿದ ದಿಂಗಾಲೇಶ್ವರ ಸ್ವಾಮೀಜಿ, ಲಿಂಗಾಯತರ ಅವನತಿಗೆ ಹುಟ್ಟಿರುವ ಶಕ್ತಿ ಇದು. ನಾನು ಯಾವ ಪಕ್ಷದ ಪರ ಇಲ್ಲ, ಜೋಶಿ ಅವರನ್ನು ಸೋಲಿಸುವುದೇ ನನ್ನ ಗುರಿ, ಜೋಶಿ ಅವರು ಮಠಗಳನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡಿದ್ದಾರೆ. ನೇಹಾ ರಕ್ತದ ಮೇಲೆ ಚುನಾವಣೆ ಮಾಡ್ತೀದಾರೆ. ಜೋಶಿ ಸ್ವಾರ್ಥಿ, ಇದನ್ನು ಜನ ಗಮನಿಸಬೇಕು. ಲಿಂಗಾಯತರ ಸಾವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ನಿಮಗೆ ಆತ್ಮಸಾಕ್ಷಿ ಮಾನ ಮರ್ಯಾದೆ ಇದ್ದರೆ, ಯಾಕೆ ನಮ್ಮ ಹಿರಿಯ ಸ್ವಾಮೀಜಿಗಳ ಬಳಿ ಹೋಗುತ್ತಿದ್ರಿ? ಚುನಾವಣೆ ಬಂದಾಗ ಮಾತ್ರ ಸ್ವಾಮೀಜಿಗಳು ಬೇಕಾ ನಿಮಗೆ ಎಂದು ಪ್ರಶ್ನಿಸಿದ ದಿಂಗಾಲೇಶ್ವರ ಸ್ವಾಮೀಜಿ, ನನ್ನ ಹಿರಿಯ ಸ್ವಾಮೀಜಿಗಳಿಂದ ನನ್ನ ಮೇಲೆ ಒತ್ತಡ. ನಮ್ಮ ಹಿರಿಯ ಸ್ವಾಮೀಜಿ ಶಿವಯೋಗಿ ಸಿದ್ಧರಾಮ ಮಹಾಸ್ವಾಮಿಗಳನ್ನು ಪದೇ ಪದೇ ಭೇಟಿ ಮಾಡುತ್ತಿದ್ದಾರೆ. ಗುರು ಶಿಷ್ಯರನ್ನು ಅಗಲಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮದು ಧರ್ಮ ಯುದ್ಧ, ಪ್ರಹ್ಲಾದ್‌ ಜೋಶಿ ಅವರು 20 ವರ್ಷ ಸಂಸದರಾಗಿ ಏನು ಕೆಲಸ ಮಾಡಿದ್ದಾರೆ ಎಂದರೆ, ಲಿಂಗಾಯತ ಸಮಾಜವನ್ನು ತುಳಿಯುವಂತಹ ಕೆಲಸವನ್ನು ಮಾಡಿದ್ದಾರೆ, ಲಿಂಗಾಯತ ನಾಯಕರನ್ನು ತುಳಿಯುವಂತಹ ಕೆಲಸ ಮಾಡಿದ್ದಾರೆ. ದಲಿತರು, ಕುರುಬರು, ಮರಾಠ ಸಮಾಜದವರನ್ನು ತುಳಿಯುವಂತಹ ಕೆಲಸ ಮಾಡಿದ್ದಾರೆ. ಅವರನ್ನು ಯಾರು ಬೆಳೆಸಿದ್ದರೋ ಅವರನ್ನೇ ನಾಶ ಮಾಡುವಂತಹ ಬಹುದೊಡ್ಡ ಸಾಹಸವನ್ನು ಮಾಡಿದ್ದಾರೆ ಹೊರತು ಯಾವುದೇ ರೀತಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲಿಲ್ಲ ಎಂದು ಕಿಡಿಕಾರಿದರು.

Leave a Reply

Your email address will not be published. Required fields are marked *

error: Content is protected !!
× How can I help you?