ಬೆಳಗಾವಿ : ಹಾಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ ಹಾಗೂ ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ನಡುವಿನ ತ್ರಿಕೋನ ಸ್ಪರ್ಧೆಯಲ್ಲಿ ಚಿಕ್ಕೋಡಿ ಗೆದ್ದು ಇತಿಹಾಸ ನಿರ್ಮಿಸುವರು ಯಾರು ಎಂಬ ಚರ್ಚೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಜೋರಾಗಿದೆ.
ಈ ಹಿಂದೆ ಮಾಡಿರುವ ಅಭಿವೃದ್ಧಿ ಕೆಲಸ, ಪ್ರಸ್ತುತ ಸರ್ಕಾರದ ಗ್ಯಾರಂಟಿ ಯೋಜನೆಗಳು ಹಾಗೂ ಜಾರಕಿಹೊಳಿ ಕುಟುಂಬದ ಮೇಲಿರುವ ಜನರ ಪ್ರೀತಿಯನ್ನು ನಂಬಿ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪರ ಮತ ಕೇಳಿದ್ದರು.
ಇನ್ನೂ ಮೋದಿ ಮುಖ ನೋಡಿ ನನಗೆ ಮತ ನೀಡಿ ಎಂದು ಹಾಲಿ ಸಂಸದ ಜೊಲ್ಲೆ ಕೇಳಿಕೊಂಡಿದ್ದರು. ಈ ಮಧ್ಯೆ ಕಾಂಗ್ರೆಸ್ ಸೋಲಿಸುವುದೇ ನನ್ನ ಗುರಿ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಶಂಭು ಜನರ ತಲೆಯಲ್ಲಿ ಚಿಂತನೆ ಹರಿಬಿಡುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಾರಿ ಚಿಕ್ಕೋಡಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದೆ. ಕಳೆದ 2019 ರ ಚುನಾವಣೆಗೆ ಹೋಲಿಸಿದರೆ ಪ್ರತಿಶತ ಶೇಕಡಾ 3 ರಷ್ಟು ಮತ ಪ್ರಮಾಣ ಹೆಚ್ಚಳವಾಗಿದ್ದು 78 % ಮತದಾನವಾಗಿದೆ. ಈ ಸಲದ ದಾಖಲೆ ಪ್ರಮಾಣದ ಮತದಾನ ಯಾರಿಗೆ ಲಾಭ ಆಗಲಿದೆ ಎಂಬ ಲೆಕ್ಕಾಚಾರದಲ್ಲಿ ಜನ ಇದ್ದಾರೆ.
ಆದರೆ ಮೇಲ್ನೋಟಕ್ಕೆ ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಸ್ವಲ್ಪ ಲಾಭವಾಗುವ ಲಕ್ಷಣ ಗೋಚರಿಸುತ್ತಿದೆ. ಯಾಕೆಂದರೆ ಮೋದಿ ಅಲೆಯ ನಡುವೆಯೂ ಜಾರಿಹೊಳಿ ಮನೆತನದ ಪ್ರಭಾವ ಮತ್ತು ಹೊಸ ಮುಖದ ಕಡೆ ಜನ ಒಲವು ಹೊಂದಿರುವ ಮಾತು ಕ್ಷೇತ್ರದಲ್ಲಿ ಹೆಚ್ಚು ಕೇಳಿಬರುತ್ತಿವೆ.
ಕಾಂಗ್ರೆಸ್ ಗೆ ಶಂಭು ಅಡ್ಡಗಾಲು…? ಹೌದು ಲೋಕಸಭಾ ಚುನಾವಣೆ ಸಮೀಪದಲ್ಲಿರುವ ಸಂದರ್ಭದಲ್ಲಿ ವೇಗ ಪಡೆದುಕೊಂಡಿದ್ದ ಪಕ್ಷೇತರ ಅಭ್ಯರ್ಥಿ ಶಂಬು ಕಲ್ಲೋಳಿಕರ ಪಡೆಯುವ ಮತಗಳ ಆಧಾರದ ಮೇಲೆ ಕಾಂಗ್ರೆಸ್ ಗೆಲುವು ಅವಲಂಬಿಸಿದೆ.
ಪರಿಶಿಷ್ಟ ಜಾತಿಗೆ ಸೇರಿರುವ ಶಂಭು ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಗೆ ಸಾಕಷ್ಟು ಡ್ಯಾಮೆಜ್ ಮಾಡುವಲ್ಲಿ ಯಶಸ್ವಿಯಾಗಿದ್ದರು, ಆದರೆ ಕೊನೆ ಕ್ಷಣದಲ್ಲಿ ಜನ ಗೆಲ್ಲುವ ಅಭ್ಯರ್ಥಿಗೆ ಮತ ನೀಡಿರುವ ಲೆಕ್ಕಾಚಾರ ನಿಜವಾದರೆ ಕಾಂಗ್ರೆಸ್ ಗೆ ಶಂಭು ತಲೆನೋವು ತರಲಾರರು.
ಜೊಲ್ಲೆ ಕೈ ಬಿಟ್ಟರಾ ಹೊಳೆಸಾಲ ಜನ : ಕೃಷ್ಣಾ ನದಿ ಪಾತ್ರದ ಜನ ಕಳೆದ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಥಣಿ, ಕಾಗವಾಡ, ನಿಪ್ಪಾಣಿ, ಚಿಕ್ಕೋಡಿ ಸೇರಿದಂತೆ ಕೆಲವು ಭಾಗಗಳಲ್ಲಿ ಬಿಜೆಪಿಗೆ ಸಹಕಾರಿ ಆಗಿತ್ತು. ಆದರೆ ಈ ಬಾರಿ ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅವರಿಗೆ ನದಿ ಪಾತ್ರದ ಮತದಾರರು ಕೈಕೊಟ್ಟ ಲಕ್ಷಣ ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಜೊತೆಗೆ ಅಭಿವೃದ್ಧಿ ಕೆಲಸ ಮಾಡದೆ ಇರುವುದು ಹಾಗೆಯೆ ಜನರ ಸಮಸ್ಯೆ ಆಲಿಸದೆ ದೂರ ಉಳಿದ ಪರಿಣಾಮ ಈ ಬಾರಿ ಜೊಲ್ಲೆಗೆ ಸಂಕಷ್ಟ ಪಕ್ಕಾ ಎನ್ನುತ್ತಾರೆ ಕೆಲವರು. ಆದರೆ ಮೋದಿ ಮಾಂತ್ರಿಕತೆ ಎಲ್ಲವನ್ನೂ ಮರೆಸಿದರು ಅಚ್ಚರಿ ಪಡಬೇಕಿಲ್ಲ.
ಏನಿದೆ ಚಿಕ್ಕೋಡಿ ಲೆಕ್ಕಾಚಾರ : ಬೆಳಗಾವಿ ವೈಸ್ ನಡೆಸಿದ ಕೆಲ ಮೂಲಗಳ ಸರ್ವೇ ಹಾಗೂ ವರದಿಗಾರಿಕೆ ಪ್ರಕಾರ ಈ ಬಾರಿ ಚಿಕ್ಕೋಡಿಯಲ್ಲಿ ಕಾಂಗ್ರೆಸ್ ನ ಕೆಲವು ತಂತ್ರಗಳು ಯಶಸ್ವಿಯಾದಂತೆ ಕಂಡುಬರುತ್ತಿವೆ.
ಸಾಮಾನ್ಯವಾಗಿ “M” ಪೋಷಕಾಂಶ ಸರಿಯಾದ ಪ್ರಮಾಣದಲ್ಲಿ ಕೆಲಸ ಮಾಡಿದೆ ಎಂಬುದು ಚುನಾವಣಾ ಪರಿಣಿತರ ಅಭಿಪ್ರಾಯ. ಜೊತೆಗೆ ಹೊಸ ಮುಖ ಮತ್ತು ಹಾಲಿ ಸಂಸದರ ವಿರುದ್ಧ ಜನ ವಿರೋಧಿ ಅಲೆ ಈ ಬಾರಿ ಕೊಂಚ ಕಾಂಗ್ರೆಸ್ ಗೆ ನೆರವಾಗುವ ಲಕ್ಷಣ ಇರುವುದು ಸ್ಪಷ್ಟ.
ಇನ್ನೂ ಬಿಜೆಪಿಗೆ ಚಿಕ್ಕೋಡಿಯಲ್ಲಿ ಅವಕಾಶ ಇಲ್ಲವಾ ಎಂಬುದು ತಪ್ಪು. ಪ್ರಧಾನಿ ನರೇಂದ್ರ ಮೋದಿ ಮೇಲಿನ ಜನರ ಪ್ರೀತಿ ಈ ಬಾರಿ ಜೊಲ್ಲೆಯನ್ನು ಎರಡನೇ ಅವಧಿಗೆ ಸಂಸದರನ್ನಾಗಿ ಮಾಡಲೂಬಹುದು. ಅಷ್ಟೇ ಅಲ್ಲದೆ ಪಕ್ಷೇತರ ಅಭ್ಯರ್ಥಿ ಶಂಭು ಕಲ್ಲೋಳಿಕರ ಮತ ಹೆಚ್ಚು ಪಡೆದಷ್ಟು ಬಿಜೆಪಿ ಗೆಲುವಿಗೆ ಸಹಕಾರಿ ಆಗುವುದು ಸ್ಪಷ್ಟ. ಏನೇ ಇದ್ದರು ಜೂನ್ ೪ ಕ್ಕೆ ಎಲ್ಲದರ ಚಿತ್ರಣ ತಿಳಿಯಲಿದೆ.